ಶನಿವಾರ, ಸೆಪ್ಟೆಂಬರ್ 10, 2016

ಸೌಂದರ್ಯವನ್ನರಸಿ..

ಮೊನ್ನೆ ತುಂಬಾ ಕೆಲಸಗಳ ಮಧ್ಯೆ ಯಾಕೋ ಬೇಸರವಾಗತೊಡಗಿತ್ತು. ಏನಿದು? ಯಾಕಿಷ್ಟು ಬ್ಯುಸಿ ಆದೆ? ಎಲ್ಲಿಗೂ ಹೋಗಲು ಆಗದಷ್ಟು ಕೆಲಸ. ಕ್ಯಾಂಪಸ್ ತುಂಬಾ ಕಾಡು ಇದೆ. ಎಷ್ಟು ವರ್ಷವಾಯಿತು ಸರಿಯಾಗಿ ಪಕ್ಷಿವೀಕ್ಷಣೆ ಮಾಡಲು ಹೋಗಿ? ಮಳೆಗಾಲದಲ್ಲಿ ಚಿತ್ರ-ವಿಚಿತ್ರ ಕೀಟಗಳನ್ನು ನೋಡಿ? ಚಾರಣಕ್ಕೆ ಹೋಗಿ? ವರ್ಷವೆನ್ನುವುದು ರೂಪಕವಷ್ಟೇ. ಅವೆಲ್ಲ ನೋಡೋದು ಇರ್ಲಿ, ನನ್ನಲ್ಲಿ ನಾನು ಕಳೆದು ಹೋಗಿ ಎಷ್ಟು ದಿನವಾಯಿತು? ಇಡೀ ದಿನ ಖುಷಿಯಾಗಿರಲು ಕೆಲವೊಮ್ಮೆ ಒಂದು ಸಣ್ಣ ವಿಚಾರವೂ ಸಾಕು. 



ದಿನದ ಆ ಕೆಲಸ, ಈ ಕೆಲಸ ಎಂದು ಇಡೀ ದಿನ ಕಳೆಯೋ ನಾವು ಇತ್ತೀಚಿನ ದಿನಗಳಲ್ಲಿ ಸಂತೋಷವನ್ನು ಎಲ್ಲೆಲ್ಲಿಯೋ ಹುಡುಕುತಿದ್ದೇವೆ. ಒಂದು ಕ್ಷಣ ನಿಂತು ನಮ್ಮ ಸುತ್ತಮುತ್ತಲಿನ ಜಗತ್ತನ್ನು ನೋಡುವುದಕ್ಕೂ ಪುರಸೊತ್ತಿಲ್ಲ. ಬಿಡುವು ಸಿಕ್ಕಾಗೊಮ್ಮೆ ಫೇಸ್ಬುಕ್, ವಾಟ್ಸ್ಯಾಪ್ ನೋಡಿ, ಅದರಿಂದಲೂ ಬೇಸರಗೊಂಡು, "ಥು ಏನ್ ದರಿದ್ರ" ಅನ್ನಿಸಿ ಬೇರೆಡೆ ಲಕ್ಷ್ಯ ಕೊಡುತ್ತೇವೆ.

ಅಷ್ಟು ದೊಡ್ಡ ಕ್ಯಾಮೆರಾ ತಗೊಂಡು ಯಾರು ಹೋಗ್ತಾರಪ್ಪ ವೀಕ್ಷಣೆ ಮಾಡೋಕೆ ಅನ್ನಿಸಿ ಆ ಯೋಚನೆಯನ್ನೂ ಬದಿಗಿರಿಸಿದೆ. ಇನ್ನೂ ಕೆಲವೊಮ್ಮೆ, "ಇಂಥಾ ಕಾಡು, ಬೆಟ್ಟಗಳು ಕೊಪ್ಪಳದಲ್ಲಿ ಸಿಗುವುದಿಲ್ಲ ಇಲ್ಲಿದ್ದಷ್ಟು ದಿನ ಇದನ್ನು ಅನುಭವಿಸಬೇಕು" ಎಂದು ಅನ್ನಿಸುತ್ತದೆ! 

ಫೇಸ್ಬುಕ್, ಕೋರಾ, ವಾಟ್ಸ್ಯಾಪ್ ಈ ಮೂರು ಆಪ್ಗಳನ್ನೂ ಬ್ರೌಸ್ ಮಾಡಿ ಮಾಡಿ ಬೇಸರ ಆಗೋವಷ್ಟೊತ್ತಿಗೆ ಕರೆಂಟ್ ಹೋಯ್ತು (ವೈಫೈ ಹೋಯ್ತು)! ಎಲ್ಲಾ ಬಂದು ಮಾಡಿ ಆಚೆ ಬಂದೆ. ತಂಗಾಳಿ, ಹಕ್ಕಿಗಳ ಕೂಗು, ಜೀಯೆನ್ನುವ ಜೀರುಂಡೆ, ಬೆಳ್ಳನೆಯ, ಬಾಲವುಳ್ಳ, ಬಣ್ಣ-ಬಣ್ಣದ ಚಿಟ್ಟೆಗಳು, ಹಚ್ಚ ಹಸಿರು ಕಾಡು, ಬೆಟ್ಟ. ನೋಡಿದೆ. ಅಬ್ಬಾ! ಎಷ್ಟು ಸುಂದರ! ಎಲ್ಲಿತ್ತು ಇದೆಲ್ಲ ಇಷ್ಟು ದಿನ? ಅದ್ಹೇಗೆ ನಾ ಇದನೆಲ್ಲಾ ಕಾಣದೆ ಇದ್ದೆ?  

ಕವಿಶೈಲದಲ್ಲಿ ಇದ್ದ ಗೊದಮೊಟ್ಟೆಗಳು. 



ಸೌಂದರ್ಯ ನನ್ನ ಸುತ್ತಲೂ ಇದೆ. ನಾನದನ್ನು ಗುರುತಿಸದೇ ಹೋದೆ! ಸಣ್ಣ ಸಣ್ಣ ವಸ್ತುವು ಕೂಡ ನೋಡಿದಾಗ ಬೃಹತ್ ಬ್ರಹ್ಮಾಂಡದಂತೆ ಕಾಣುತ್ತದೆ! ಆ ಚಿಕ್ಕ ಹುಲ್ಲು, ಅದರದ್ದೂ ಎಂಥಾ ಸುಂದರ ಹೂವು? ಅಷ್ಟು ವೇಗವಾಗಿ ಹಾರಬಲ್ಲ ಚಿಟ್ಟೆ ಎಷ್ಟು ಸುಲಭವಾಗಿ ತನ್ನ ದಿಕ್ಕನ್ನು ಬದಲಿಸುತ್ತದೆ? ಏರೋಪ್ಲೇನ್ ಚಿಟ್ಟೆಯದ್ದೂ ಎಂಥಾ ಸುಂದರ ದೇಹ! ನನ್ನ ಕ್ಯಾಮೆರಾ ಇದನೆಲ್ಲ ತೋರಿಸಲು ಸಾಧ್ಯವೇ ಇಲ್ಲ! ಎಲ್ಲಾ ಪಂಚೇಂದ್ರಿಯಗಳು ಏಕಕಾಲಕ್ಕೆ ಅನುಭವಿಸುವಂತಹ ಸೌಂದರ್ಯ ಇಲ್ಲಿದೆ. ಸ್ವರ್ಗ ಇಲ್ಲಿದೆ. ಕಳೆದು ಹೋದೆ! ಎಷ್ಟು ಸುಂದರವಾಗಿ ಇವೆಲ್ಲ ಹೊಂದಾಣಿಕೆಯಾಗಿವೆ?  ಮಲಯಾಳಂನ ಉಸ್ತಾದ್ ಹೋಟಲ್ ಚಿತ್ರದ "ಇಸ್ ದುನಿಯಾ ಮೆ ಅಗರ್ ಜನ್ನತ್ ಹೈ, ತೋ ವೊ ಯಹೀ ಹೈ, ಯಹೀ ಹೈ, ಯಹೀ ಹೈ.." ಹಾಡು ನೆನಪಾಗುತ್ತದೆ.

ಕವಲೇದುರ್ಗದ ಮೇಲೆ ಸಿಕ್ಕ ಒಂದು ಹೂವು 


ಇಂಗ್ಲಿಷ್ ಕವಿ ಜಾನ್ ಕೀಟ್ಸ್ ಹೇಳುವುದು ಅಕ್ಷರಶಃ ನಿಜ, "a thing of beauty is a joy forever". ಯಾವ iphone, ವಾಟ್ಸಾಪ್, ಫೇಸ್ಬುಕ್, ಸ್ಮಾರ್ಟ್ಫೋನ್ಗಳೂ ಕೊಡಲಾಗದ ಸೌಂದರ್ಯ, ಸಂತೋಷ, ನಮ್ಮ ಸುತ್ತ-ಮುತ್ತಲಲ್ಲೇ ಇವೆ. Observe  ಮಾಡುವ ಮನಸಿದ್ದರೆ ಸಾಕು!