ಸೋಮವಾರ, ಸೆಪ್ಟೆಂಬರ್ 9, 2019

ಕಪ್ಪೆಗಳ ಸಂತಾನೋತ್ಪತ್ತಿ



  






ಮಳೆಗಾಲ ಶುರುವಾದ ಒಂದು ದಿನ ಮುಂಜಾನೆ ಹೀಗೆ ಒಂದು ಒಣಗಿದ್ದ ಕೆರೆಯಲ್ಲಿ ನಮ್ಮ ಕಪ್ಪೆಗಳ ಹುಡುಕಾಟ ನಡೆದಿತ್ತು. ರಾತ್ರಿಯೆಲ್ಲಾ ಸುರಿದ ಮಳೆಯಿಂದಾಗಿ ಅಲ್ಲಲ್ಲಿ ನೀರು ನಿಂತಿತ್ತು. ಒಂದೆಡೆ ಹೀಗೆಯೇ ನೋಡುವಾಗ ೩-೪ ಕಪ್ಪೆಗಳ ಜೋಡಿಗಳು ಕಂಡವು. 

ದತ್ತಾಫ್ರಿನಸ್ ಮೆಲನೊಸ್ಟಿಕ್ಟಸ್  (ಹೆಣ್ಣು-ಗಂಡುಗಳು)
ಮೇಲಿನ ಚಿತ್ರದಲ್ಲಿರುವ, ನಮ್ಮ ದೇಶದಾದ್ಯಂತ ಕಂಡುಬರುವ, ಸಾಮಾನ್ಯ ಏಷ್ಯನ್ ಕಪ್ಪೆಯ ಸಂಯೋಗ. ಇಲ್ಲಿ ನೀವು ನೋಡುತ್ತಿರುವಂತೆ (ಕಪ್ಪೆಗಳಲ್ಲಿ ಸಾಮಾನ್ಯವಾಗಿ) ಗಂಡು ಆಕಾರದಲ್ಲಿ ಚಿಕ್ಕದಾಗಿರುತ್ತದೆ ಮತ್ತು ಹೆಣ್ಣು ದೊಡ್ಡದಾಗಿರುತ್ತದೆ. ಈ ಕಪ್ಪೆ ಕುಟುಂಬದಲ್ಲಿ  (ಕುಟುಂಬ: ಬ್ಯುಫಾನಿಡೇ) ಮೊಟ್ಟೆ ಇಡುವ ಪ್ರಕ್ರಿಯೆ ವಿಶಿಷ್ಟವಾದುದು. ಮಳೆಗಾಲದಲ್ಲಿ ಕತ್ತಲಾದ ನಂತರ ಗಂಡು ಕಪ್ಪೆಗಳು ಅಷ್ಟೊಂದು ಆಳವಿಲ್ಲದ ನೀರಿನ (ದೀರ್ಘ ದಿನಗಳವರೆಗೆ ನೀರು ನಿಲ್ಲುವಂತಹ) ಬಳಿ ಬಂದು ಹೆಣ್ಣುಗಳನ್ನು ಕರೆಯುತ್ತವೆ. ಹೀಗೆ ಬಂದ ಹೆಣ್ಣು ಸ್ಥಳ, ಮೊಟ್ಟೆಗಳ ಸುರಕ್ಷತೆಗೆ ಅನುಗುಣವಾಗಿ ಗಂಡನ್ನು ಆರಿಸುತ್ತದೆ. ಗಂಡು ಹೆಣ್ಣಿನ ಬೆನ್ನೇರಿ, ತನ್ನ ಕೈಗಳನ್ನು ಹೆಣ್ಣಿನ ಭುಜದ ಮೇಲೆ ಬಿಗಿಯಾಗಿ ಹಿಡಿಯುತ್ತದೆ. ಮೇಲಿನ ಚಿತ್ರದಲ್ಲಿ ನೀವು ನೋಡುವಂತೆ ಹೆಣ್ಣಿನ  ಹೊಟ್ಟೆ ಕರುಳು ಕಿತ್ತು ಬಂದರೂ, ಗಂಡುಗಳು ಕೆಲವೊಮ್ಮೆ ಬಿಡುವುದಿಲ್ಲ.  ಹೆಣ್ಣಿಗೆ ಮೇಲಿನ ಎಲ್ಲವು ಸರಿ ಅನಿಸಿದಲ್ಲಿ ಮೊಟ್ಟೆಗಳನ್ನು ಬಿಡುತ್ತದೆ. ಮೊಟ್ಟೆಗಳು ಹೊರ ಬರುತ್ತಿದ್ದಂತೆಯೇ, ಗಂಡು ತನ್ನ ವೀರ್ಯ ಬಿಡುಗಡೆ ಮಾಡುತ್ತದೆ. 
ಕರಿಮಣಿ ಸರದಂತೆ ಇರುವ ಮೊಟ್ಟೆಗಳು 


ಹೆಣ್ಣು ಒಂದು ಬಾರಿಗೆ ಸಾವಿರಗಟ್ಟಲೆ ಮೊಟ್ಟೆಗಳನ್ನು ಕರಿಮಣಿಯ ಸರದಂತೆ ಬಿಡುತ್ತ ಹೋಗುತ್ತದೆ, ಹೀಗೆ ಬಂದ ಪ್ರತಿಯೊಂದು ಕರಿಮಣಿಗೆ ಗಂಡು ತನ್ನ ವೀರ್ಯವನ್ನು ಸವರುತ್ತದೆ. ಈ ಪ್ರಕ್ರಿಯೆ ಘಂಟೆಗಟ್ಟಲೆ ನಡೆಯಬಹುದು. ಈ ಫಲೀಕರಣ ಪ್ರಕ್ರಿಯೆಯ ನಂತರ ಗಂಡು ಹೆಣ್ಣು ಬೇರ್ಪಟ್ಟು ಹೊರಟುಹೋಗುತ್ತವೆ. ಈ ಕಪ್ಪೆಗಳಲ್ಲಿ ಪಾಲನೆ/ಪೋಷಣೆ ಇಲ್ಲ. 

ಈ ಪ್ರಕ್ರಿಯೆಯ ನಂತರ ಮೊಟ್ಟೆಗಳು ಕೆಲವೇ ಗಂಟೆಗಳಲ್ಲಿ ಒಡೆದು ಗೊದಮೊಟ್ಟೆಗಳಾಗಿ ಪರಿವರ್ತನೆಗೊಳ್ಳುತ್ತವೆ. ಹಲವೇ  ದಿನಗಳಲ್ಲಿ ಅವು ಪಾಚಿ, ಸೂಕ್ಷ್ಮಜೀವಿಗಳನ್ನು ತಿಂದು, ಕಾಲು ಕೈಗಳು ಬಂದು ಬಾಲ ಹೋಗಿ ವಯಸ್ಕ ಕಪ್ಪೆಗಳ ರೂಪ ತಾಳುತ್ತವೆ. ಈ ಮೊಟ್ಟೆಯಿಂದ ಗೊದಮೊಟ್ಟೆಗಳಾಗಿ, ಕಪ್ಪೆಗಳಾಗಿ ಮಾರ್ಪಾಡಾಗುವ ಪ್ರಕ್ರಿಯೆಗೆ metamorphosis ಎನ್ನುತ್ತಾರೆ. ಇಲ್ಲಿ ಮರಿಗಳ ಪೋಷಣೆ ಇಲ್ಲದಿರುವುದರಿಂದ ಈ ಮೊಟ್ಟೆಗಳು ನಿಸರ್ಗದಲ್ಲಿ ಬದುಕಿ ಉಳಿಯುವುದು ವಿರಳ. ಸಾವಿರಾರು ಮೊಟ್ಟೆಗಳಲ್ಲಿ ಶೇ. ೧೦ರಕ್ಕಿಂತಲೂ ಕಡಿಮೆ ಪ್ರೌಢಾವಸ್ಥೆಗೆ ಬರುತ್ತವೆ.  

ಶನಿವಾರ, ಸೆಪ್ಟೆಂಬರ್ 10, 2016

ಸೌಂದರ್ಯವನ್ನರಸಿ..

ಮೊನ್ನೆ ತುಂಬಾ ಕೆಲಸಗಳ ಮಧ್ಯೆ ಯಾಕೋ ಬೇಸರವಾಗತೊಡಗಿತ್ತು. ಏನಿದು? ಯಾಕಿಷ್ಟು ಬ್ಯುಸಿ ಆದೆ? ಎಲ್ಲಿಗೂ ಹೋಗಲು ಆಗದಷ್ಟು ಕೆಲಸ. ಕ್ಯಾಂಪಸ್ ತುಂಬಾ ಕಾಡು ಇದೆ. ಎಷ್ಟು ವರ್ಷವಾಯಿತು ಸರಿಯಾಗಿ ಪಕ್ಷಿವೀಕ್ಷಣೆ ಮಾಡಲು ಹೋಗಿ? ಮಳೆಗಾಲದಲ್ಲಿ ಚಿತ್ರ-ವಿಚಿತ್ರ ಕೀಟಗಳನ್ನು ನೋಡಿ? ಚಾರಣಕ್ಕೆ ಹೋಗಿ? ವರ್ಷವೆನ್ನುವುದು ರೂಪಕವಷ್ಟೇ. ಅವೆಲ್ಲ ನೋಡೋದು ಇರ್ಲಿ, ನನ್ನಲ್ಲಿ ನಾನು ಕಳೆದು ಹೋಗಿ ಎಷ್ಟು ದಿನವಾಯಿತು? ಇಡೀ ದಿನ ಖುಷಿಯಾಗಿರಲು ಕೆಲವೊಮ್ಮೆ ಒಂದು ಸಣ್ಣ ವಿಚಾರವೂ ಸಾಕು. 



ದಿನದ ಆ ಕೆಲಸ, ಈ ಕೆಲಸ ಎಂದು ಇಡೀ ದಿನ ಕಳೆಯೋ ನಾವು ಇತ್ತೀಚಿನ ದಿನಗಳಲ್ಲಿ ಸಂತೋಷವನ್ನು ಎಲ್ಲೆಲ್ಲಿಯೋ ಹುಡುಕುತಿದ್ದೇವೆ. ಒಂದು ಕ್ಷಣ ನಿಂತು ನಮ್ಮ ಸುತ್ತಮುತ್ತಲಿನ ಜಗತ್ತನ್ನು ನೋಡುವುದಕ್ಕೂ ಪುರಸೊತ್ತಿಲ್ಲ. ಬಿಡುವು ಸಿಕ್ಕಾಗೊಮ್ಮೆ ಫೇಸ್ಬುಕ್, ವಾಟ್ಸ್ಯಾಪ್ ನೋಡಿ, ಅದರಿಂದಲೂ ಬೇಸರಗೊಂಡು, "ಥು ಏನ್ ದರಿದ್ರ" ಅನ್ನಿಸಿ ಬೇರೆಡೆ ಲಕ್ಷ್ಯ ಕೊಡುತ್ತೇವೆ.

ಅಷ್ಟು ದೊಡ್ಡ ಕ್ಯಾಮೆರಾ ತಗೊಂಡು ಯಾರು ಹೋಗ್ತಾರಪ್ಪ ವೀಕ್ಷಣೆ ಮಾಡೋಕೆ ಅನ್ನಿಸಿ ಆ ಯೋಚನೆಯನ್ನೂ ಬದಿಗಿರಿಸಿದೆ. ಇನ್ನೂ ಕೆಲವೊಮ್ಮೆ, "ಇಂಥಾ ಕಾಡು, ಬೆಟ್ಟಗಳು ಕೊಪ್ಪಳದಲ್ಲಿ ಸಿಗುವುದಿಲ್ಲ ಇಲ್ಲಿದ್ದಷ್ಟು ದಿನ ಇದನ್ನು ಅನುಭವಿಸಬೇಕು" ಎಂದು ಅನ್ನಿಸುತ್ತದೆ! 

ಫೇಸ್ಬುಕ್, ಕೋರಾ, ವಾಟ್ಸ್ಯಾಪ್ ಈ ಮೂರು ಆಪ್ಗಳನ್ನೂ ಬ್ರೌಸ್ ಮಾಡಿ ಮಾಡಿ ಬೇಸರ ಆಗೋವಷ್ಟೊತ್ತಿಗೆ ಕರೆಂಟ್ ಹೋಯ್ತು (ವೈಫೈ ಹೋಯ್ತು)! ಎಲ್ಲಾ ಬಂದು ಮಾಡಿ ಆಚೆ ಬಂದೆ. ತಂಗಾಳಿ, ಹಕ್ಕಿಗಳ ಕೂಗು, ಜೀಯೆನ್ನುವ ಜೀರುಂಡೆ, ಬೆಳ್ಳನೆಯ, ಬಾಲವುಳ್ಳ, ಬಣ್ಣ-ಬಣ್ಣದ ಚಿಟ್ಟೆಗಳು, ಹಚ್ಚ ಹಸಿರು ಕಾಡು, ಬೆಟ್ಟ. ನೋಡಿದೆ. ಅಬ್ಬಾ! ಎಷ್ಟು ಸುಂದರ! ಎಲ್ಲಿತ್ತು ಇದೆಲ್ಲ ಇಷ್ಟು ದಿನ? ಅದ್ಹೇಗೆ ನಾ ಇದನೆಲ್ಲಾ ಕಾಣದೆ ಇದ್ದೆ?  

ಕವಿಶೈಲದಲ್ಲಿ ಇದ್ದ ಗೊದಮೊಟ್ಟೆಗಳು. 



ಸೌಂದರ್ಯ ನನ್ನ ಸುತ್ತಲೂ ಇದೆ. ನಾನದನ್ನು ಗುರುತಿಸದೇ ಹೋದೆ! ಸಣ್ಣ ಸಣ್ಣ ವಸ್ತುವು ಕೂಡ ನೋಡಿದಾಗ ಬೃಹತ್ ಬ್ರಹ್ಮಾಂಡದಂತೆ ಕಾಣುತ್ತದೆ! ಆ ಚಿಕ್ಕ ಹುಲ್ಲು, ಅದರದ್ದೂ ಎಂಥಾ ಸುಂದರ ಹೂವು? ಅಷ್ಟು ವೇಗವಾಗಿ ಹಾರಬಲ್ಲ ಚಿಟ್ಟೆ ಎಷ್ಟು ಸುಲಭವಾಗಿ ತನ್ನ ದಿಕ್ಕನ್ನು ಬದಲಿಸುತ್ತದೆ? ಏರೋಪ್ಲೇನ್ ಚಿಟ್ಟೆಯದ್ದೂ ಎಂಥಾ ಸುಂದರ ದೇಹ! ನನ್ನ ಕ್ಯಾಮೆರಾ ಇದನೆಲ್ಲ ತೋರಿಸಲು ಸಾಧ್ಯವೇ ಇಲ್ಲ! ಎಲ್ಲಾ ಪಂಚೇಂದ್ರಿಯಗಳು ಏಕಕಾಲಕ್ಕೆ ಅನುಭವಿಸುವಂತಹ ಸೌಂದರ್ಯ ಇಲ್ಲಿದೆ. ಸ್ವರ್ಗ ಇಲ್ಲಿದೆ. ಕಳೆದು ಹೋದೆ! ಎಷ್ಟು ಸುಂದರವಾಗಿ ಇವೆಲ್ಲ ಹೊಂದಾಣಿಕೆಯಾಗಿವೆ?  ಮಲಯಾಳಂನ ಉಸ್ತಾದ್ ಹೋಟಲ್ ಚಿತ್ರದ "ಇಸ್ ದುನಿಯಾ ಮೆ ಅಗರ್ ಜನ್ನತ್ ಹೈ, ತೋ ವೊ ಯಹೀ ಹೈ, ಯಹೀ ಹೈ, ಯಹೀ ಹೈ.." ಹಾಡು ನೆನಪಾಗುತ್ತದೆ.

ಕವಲೇದುರ್ಗದ ಮೇಲೆ ಸಿಕ್ಕ ಒಂದು ಹೂವು 


ಇಂಗ್ಲಿಷ್ ಕವಿ ಜಾನ್ ಕೀಟ್ಸ್ ಹೇಳುವುದು ಅಕ್ಷರಶಃ ನಿಜ, "a thing of beauty is a joy forever". ಯಾವ iphone, ವಾಟ್ಸಾಪ್, ಫೇಸ್ಬುಕ್, ಸ್ಮಾರ್ಟ್ಫೋನ್ಗಳೂ ಕೊಡಲಾಗದ ಸೌಂದರ್ಯ, ಸಂತೋಷ, ನಮ್ಮ ಸುತ್ತ-ಮುತ್ತಲಲ್ಲೇ ಇವೆ. Observe  ಮಾಡುವ ಮನಸಿದ್ದರೆ ಸಾಕು!

ಭಾನುವಾರ, ಸೆಪ್ಟೆಂಬರ್ 6, 2015

ಈ ಕಪ್ಪೆಗಳನ್ನು ಕಂಡಿದಿರಾ?

Common Asian Toad(Duttaphrynus melanostictus), "Bufo melanostictus front". Licensed
under Creative Commons Attribution 2.5 via Wikimedia Commons.

ನನ್ನ ಆಸಕ್ತಿಗಳಲ್ಲಿ ಈಗ ಕಪ್ಪೆಯೂ ಒಂದು. ಸಾಮಾನ್ಯವಾಗಿ Common Asian Toad ಒಂದನ್ನೇ ಬಯಲು ಸೀಮೆಯಲ್ಲಿ ನಾನು ನೋಡಿದ್ದೆ, ಶಿವಮೊಗ್ಗದ ಸಹ್ಯಾದ್ರಿ ಬೆಟ್ಟಗಳ ಹತ್ತಿರ ಬಂದಾಗ  ನನಗೆ ಬಗೆಬಗೆಯ ಕಪ್ಪೆಗಳು ಕಾಣಸಿಗತೊಡಗಿದವು. ಕ್ರಮೇಣ ಹೊಸ ಕಪ್ಪೆಗಳನ್ನು ಹುಡುಕಿಕೊಂಡು ಹೊರಟೆ. ಆಗ ನನಗೆ ನಮ್ಮ ಕ್ಯಾಂಪಸ್ನಲ್ಲಿಯೇ ಮೊದಲು ಕಂಡದ್ದು, Zakerana  sp.  
(ಭತ್ತದ ಗದ್ದೆ ಕಪ್ಪೆ) Fejervarya  sp. 
ಸಾಮಾನ್ಯವಾಗಿ ಕಾಣಸಿಗುವ ಈ ಕಪ್ಪೆ ನೀರು ಇರುವ ಕಡೆ ವಾಸಿಸುತ್ತದೆ.

ಇದಾದ ಎಷ್ಟೋ ದಿನಗಳ ನಂತರ, ಬೆಳೆಗ್ಗೆ ತಿಂಡಿ ಮುಗಿಸಿ ಮೆಸ್ಸಿನಿಂದ ಹೊರ ಬರುತಿದ್ದೆ. ಸ್ವಲ್ಪ ಮುಂದೆ ಮೆಟ್ಟಿಲುಗಳ ಬಳಿ ಇಳಿದು ಮೂಲೆಯಲ್ಲಿ ನೋಡಿದಾಗ  ೬-೭ ಬೇರೆ ಬೇರೆ ತರದ ಕಪ್ಪೆಗಳು ಕಂಡವು. ಬೇಗನೆ ಕ್ಯಾಮೆರಾ ತರಲು ಹೋದೆ. ಹಿಂದಿನ ದಿನ ಮಳೆಯಾಗಿತ್ತು. ಆಗ ನನಗೆ ಕಂಡದ್ದು, Sri Lankan Painted Frogs . 
Sri Lankan Painted Frog. 
ಈ ಕಪ್ಪೆಗಳು ಮಳೆಯಾದ ಕೂಡಲೇ ಆಚೆಗೆ ಬರುತ್ತವೆ.
ಅದೇ ದಿನ ಅಪಾಯದ ಅಂಚಿನಲ್ಲಿರುವ ಅಂಬೋಲಿ ಪೊದೆ ಕಪ್ಪೆ ನನಗೆ ಕಂಡಿತು.  ಕೈ ಬೆರಳಿನ ಉಗುರಿನಷ್ಟು ಸಣ್ಣದಾಗಿತ್ತು. 
ಅಂಬೋಲಿ ಪೊದೆ ಕಪ್ಪೆ (Pseudophilautus amboli)

ಇನ್ನು ಒಮ್ಮೆ ಅದೇ ಊಟದ ಹಾಲ್ನಿಂದ ಹೊರ ಬರುವಾಗ ನನ್ನ ಗೆಳೆಯನಾದ ಮಂಜುನಾಥನಿಗೆ ಕಂಡದ್ದು Uperodon variegata. ಇದು ಕೂಡ ಮಳೆಯಾದ ನಂತರವೇ ಕಂಡದ್ದು.
Uperodon variegata 
ನಾವು ಒಮ್ಮೆ ಕೊಡಚಾದ್ರಿಯ ಹತ್ತಿರ ಇರುವ ಹಿಡ್ಲುಮನೆ ಜಲಪಾತದ ಹತ್ತಿರ ಹೋದಾಗ ಅದೆಷ್ಟೋ ಕಪ್ಪೆಗಳು ಕಂಡವು. ಮೊದಲಿಗೆ ಕಂಡದ್ದು Indian Skittering Frog (Euphlyctis sp.). ಇದು ತುಂಬಾ ಸಕ್ರಿಯ ಕಪ್ಪೆ. ನೆಗೆಯುವುದನ್ನು ಹಿಡಿಯುವುದು ಕಷ್ಟ. 
Euphlyctis sp.  
ಅಲ್ಲೇ ಸಮೀಪದಲ್ಲಿ ಅತಿ ಮೆಲ್ಲಗೆ ಹರಿಯುವ ಹಳ್ಳದಲ್ಲಿ ಗೊದಮೊಟ್ಟೆಗಳು ಕಂಡವು. ನೂರಾರು ಸಂಖ್ಯೆಯಲ್ಲಿದ್ದ ಇವು  Bicolored frog (Clinotarsus curtipes) ಎಂದು.
Bicolored frog ಗೊದಮೊಟ್ಟೆಗಳು 

Bicolored frog ಗೊದಮೊಟ್ಟೆ 




ಮೇ ತಿಂಗಳಲ್ಲಿ ಇನ್ನೇನು ಮಳೆ ಶುರುವಾಯ್ತು ಎನ್ನುವಾಗ ನನ್ನ ಕೋಣೆಯ ಒಳಗೆ ಬಂದ ಅತಿಥಿ Indian Tree Frog (Polypedates maculotus). ತುಂಬಾ ಸೌಮ್ಯ ಸ್ವಭಾವದ ಕಪ್ಪೆ. ಕೋಣೆಯಲ್ಲಿ ಎಷ್ಟೋ ಹೊತ್ತು ಗೋಡೆಯ ಮೇಲೆ ಕುಳಿತಿತ್ತು.
Indian Tree Frog
ಹೆಸರೇ ಹೇಳುವ ಹಾಗೆ ಇವು ಮರ ಎರಬಲ್ಲವು. ಇವುಗಳು ಎಲೆಗಳ ತುದಿಯಲ್ಲಿ ನೊರೆಯಲ್ಲಿ ಮೊಟ್ಟೆಗಳನ್ನಿಡುತ್ತವೆ. ಎರಡನೆ ಮಹಡಿ ಏರಿ ನನ್ನ ಟೇಬಲ್ಲಿನ ಮೇಲೆ ಕುಳಿತಿರುವ ಚಿತ್ರ ನೀವು ನೋಡಬಹುದು.

ಇನ್ನು,  ಕೊಪ್ಪಳದಲ್ಲಿ ಒಮ್ಮೆ ಹೀಗೆ ತಿರುಗಲು ಹೋದಾಗ ಒಂದು ಕೆರೆಯಲ್ಲಿ ಕಂಡ ಕಪ್ಪೆಯ ಜೋಡಿ. ಇದರ ಹೆಸರು ಭಾರತೀಯ ಗೋಂಕರು ಕಪ್ಪೆ. ಇವುಗಳನ್ನು ಇದರ ತೊಡೆಮಾಂಸಕ್ಕಾಗಿ ಹಿಡಿದು ಅಕ್ರಮವಾಗಿ ಮಾರುತ್ತಾರೆ.


ಗುರುವಾರ, ಡಿಸೆಂಬರ್ 26, 2013

ಎಲೆ ಉದುರುವ ಕಾಡುಗಳಲ್ಲಿ...

ಬಯಲು ಸೀಮೆಯವರಿಗೆ ಕಾಡು ಎಂದರೆ ಬಹುಶಃ ಜಾಲಿ ಮರಗಳ ಪೊದೆಯೋ, ಅಥವಾ ಟೀವಿಯಲ್ಲಿ ತೋರಿಸುವ, ಸದಾ ಹಸುರಿನಿಂದಲೇ ಕೂಡಿರುವ, ದೊಡ್ಡ-ದೊಡ್ಡ ಮರಗಳಿರುವ, ಕಾಡು ಪ್ರಾಣಿಗಳಿರುವ ಸ್ಥಳವೆಂದು ಮನಸ್ಸಿನಲ್ಲಿ ಒಂದು ಚಿತ್ರ ಮೂಡಬಹುದು. ನಿಜವಾಗಿಯೂ ಕಾಡು ಎಂತಹ ಅನುಭವ ಕೊಡುತ್ತದೆ ಎನ್ನುವುದು ಗೊತ್ತಾಗಬೇಕೆಂದರೆ ಅಲ್ಲಿಗೆ ಹೋಗಲೇಬೇಕು.

ಕರ್ನಾಟಕದ ಬಯಲುಸೀಮೆಯಲ್ಲಿ ಅಂತಹ ಕಾಡುಗಳು ಉಳಿದಿಲ್ಲವಾದರೂ, ಮಲೆನಾಡಿನಲ್ಲಿ ದಟ್ಟ ಅರಣ್ಯಗಳು ಎಂದು ಕರೆಯುವ ಮಟ್ಟಿಗಾದರೂ ಉಳಿದಿವೆ. 

ಇಂತಹ ಅನುಭವಕ್ಕಾಗಿಯೇ ಏನೋ ನಾನು ಭದ್ರಾ ವನ್ಯಜೀವಿ ಧಾಮದ ಹತ್ತಿರದಲ್ಲೇ ಇರುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ stumbled upon ಆಗಿದ್ದು ಅನ್ನಿಸುತ್ತದೆ.

ಸೆಮೆಸ್ಟರ್ ಶುರುವಾದ ಮೊದಲೆರೆಡು ತಿಂಗಳುಗಳು ಬಿಟ್ಟೂಬಿಡದ ಮಳೆ! ರಜೆ ಸಿಕ್ಕಾಗ, ಮಳೆ ನಿಂತಿದ್ದು ನೋಡಿ ಕಾಡಿಗೆ ಹೋಗಬೇಕು! ಹೀಗೆ ಸ್ವಲ್ಪ ದಿನ ಕಾದು, ಒಂದು ಭಾನುವಾರ ನಾನೂ, ಶ್ರೇಯಸ್ಸೂ ಕಾಡಿಗೆ ಹೊರಟೆವು. ಹಾಸ್ಟೆಲ್ನ ಪಕ್ಕ ಕಾಡಿನೊಳಗೆ ಒಂದು ದಾರಿ ಹೋಗುತ್ತದೆ, ಆ ದಾರಿಯಿಂದ ಲಂಟಾನಗಳ ಮಧ್ಯೆ ನುಸುಳಿ, ಕಾಡಿಗೆ entry ಕೊಟ್ಟೆವು. ದಾರಿ ದೂರಾಗುತ್ತಿದ್ದಂತೆ, ರೋಮಾಂಚನ, ಒಂದುಕಡೆ ಭಯ ಶುರುವಾಯಿತು. (ಮೊದಲ ಬಾರಿ ತಯಾರಿಯಿಲ್ಲದೆ, ಅರಿಯದೆ ಹೋಗುತ್ತಿರುವದರಿಂದ). ಅಲ್ಲಲ್ಲಿ ಬಿದಿರು ಮೆಳೆಗಳಿದ್ದವು. ಎಲ್ಲೆಲ್ಲೂ ವಿವಿಧ ಮರಗಳು, ಪೂರ್ಣಚಂದ್ರ ತೇಜಸ್ವಿಯವರು ಹೇಳುವಂತೆ ಎಲ್ಲೆಡೆ ಜಿಗ್ಗು ಲಂಟಾನ ಬೆಳೆದಿತ್ತು. ಕೆಲವೊಂದು ಕಡೆ ಮುನ್ನಡೆಯುವುದು ಕಷ್ಟವಾಗಿತ್ತು. ಬಗ್ಗಿ, ತೆವಳಿ ಹೋಗಬೇಕಾಗಿತ್ತು. ಸೂರ್ಯನ ಬಿಸಿಲು ಬೀಳದಷ್ಟು ದಟ್ಟವಾಗಿತ್ತು ಕಾಡು. ಪಾಚಿ ಮತ್ತು ಕಲ್ಲುಹೂವುಗಳು ಹೇರಳವಾಗಿದ್ದವು. ಶ್ರೇಯಸ್ ಮತ್ತು ನಾನು ನಮ್ಮ ಮೊಬೈಲಿನಲ್ಲಿ ಫೋಟೋ ತಗೆಯುತ್ತಿದ್ದೆವು. ಈ ಕಾಡಿನಲ್ಲಿ ನಾನು ಆರ್ಕಿಡ್ಗಳನ್ನು ಮತ್ತು ಪಕ್ಷಿಗಳನ್ನು ನೋಡಲು ಬಂದಿದ್ದೆ.
ಕಾಡಲ್ಲಿ 

ಕಾಡಿನಲ್ಲಿ ಸುಮಾರು ೨೦೦ಮೀ ಹೋಗಿದ್ದೆವು. ಎಷ್ಟು ಹುಡುಕಿದರೂ ಒಂದೂ ಆರ್ಕಿಡ್ ಕಾಣಲಿಲ್ಲ. ಈ ಮಧ್ಯೆ "ಶ್!", ನಾನೆಂದೆ, "ಏನೋ ಸದ್ದಾಯ್ತು"! ನಮ್ಮ ಗಮನ ಆ ಕಡೆ ಹರಿಯಿತು. ಎಲ್ಲಿ ನೋಡಿದರೂ ಅಲಗಾಡುವ ಎಲೆಗಳು. ದೂರದಲ್ಲೆಲ್ಲೋ Scimitar Babblerನ ಸದ್ದು. ಏನೂ ಅರ್ಥವಾಗಲಿಲ್ಲ. ಮುಂದಕ್ಕೆ ಹೊರಟೆವು ಏನೋ ಓಡಿದಂತೆ ಅನಿಸಿತು. ಮುಂದೆ ಮುಂದೆ ಹೋದೆವು, ಕ್ರಮೇಣ ದೊಡ್ಡ ಮರಗಳು ಇದ್ದವು. ಏನೂ ಕಾಣಲಿಲ್ಲ. ಶ್ರೇಯಸ್ "ಬ್ಯಾಡ ಲೇ" ಅಂತಾನು, ನಾನು "ಇಲ್ಲಿ ತುಂಬಾ ಜಿಂಕೆಗಳಿವೆ ಅಂತ ಕೇಳಿದೀನಿ, ಅವು ಏನೂ ಮಾಡುವದಿಲ್ಲ, ಹೆದರಿ ಓದಿ ಹೋಗ್ತವೆ", ಎಂದೂ " ಹುಲಿ ಅಂತು ಈಕಡೆ ಇಲ್ಲ, ಇದ್ದರೆ ಚಿರತೆ ಬರಬೇಕು. ಅದು ಸುಮ್ಮನೆ ಮನುಷ್ಯನ ಮೇಲೆ ದಾಳಿ ಮಾಡುವ ಪ್ರಾಣಿಯಲ್ಲ, ಕಾಡಿನಲ್ಲಿ ಆಹಾರ ಸಿಗದೇ ಹೋದರೆ ನಾಡಿಗೆ ಬರುತ್ತವೆ" ಎಂದು ಹೇಳಿದೆ. ಇತ್ತ ಇನ್ನೊಂದೆಡೆ ನವಿಲು ಕೂಗುತಿತ್ತು. ಅದನ್ನ ನೋಡೋಣ ಎಂದು ಆಕಡೆ ಹೊರಟೆವು.

ನಾನು ಚಿರತೆ ಎಂದು ಹೇಳಿದ್ದು ಅವನಲ್ಲಿ ಇನ್ನಷ್ಟು ಭಯ ಹುಟ್ಟಿಸಿತು, ಮೂಲತಃ ಬೆಂಗಳೂರಿನವನಾದ ಅವನು ಅಲ್ಲಿ ಜೀವನಕ್ಕೆ ಬೇಸತ್ತು ಈಕಡೆ ಬಂದಿದ್ದ! ಅಷ್ಟರಲ್ಲೇ ನಮಗೆ ಇನ್ನೊಂದು ಭಯಾನಕ ಪರಿಸ್ಥಿತಿ ಎದುರಾಯ್ತು! ಅದು ಬೆಚ್ಚಿಬೀಳುವ ಸದ್ದಾಗಿತ್ತು! "ಭ್ಯಾ",  "ಭ್ಯಾ" ಎಂದು ಮೂರು secondಗೊಮ್ಮೆ ಯಾವುದೊ ಪ್ರಾಣಿ ನಮ್ಮಿಂದ ಸುಮಾರು ೧೦೦ಮೀ ಅಂತರದಲ್ಲಿ ಕೂಗತೊಡಗಿತು. "Oh f***!" ಎಂದ ಶ್ರೇಯಸ್, ನನಗೂ ಭಯ ಬೀಳಿಸಿದ!

ಅವನಿಗೆ ಅದೇನೆಂದು ಗೊತ್ತಿರಲಿಲ್ಲ, ಇಲ್ಲಿ ನನಗೂ ಅನುಮಾನ ಶುರುವಾಯ್ತು, ಇದೇನಪ್ಪ ಎಲ್ಲಿಂದ ಬಂತು ಎಂದು. ನಮಗೆ ಭಯಗೊಳ್ಳಲು ಇನ್ನೊಂದು ಕಾರಣವೆಂದರೆ ಆ ಸದ್ದು ನಾವು ಬಂದ ದಾರಿಯಿಂದ ಬಂದದ್ದು!! ನಮಗೆ ವಾಪಸ್ಸು ಹೋಗಲು ದಾರಿಯೇ ಇರಲಿಲ್ಲ! ಏನೂ ಮಾಡಲು ತೋಚದೆ ಅಲ್ಲೇ ಮರದ ಹಿಂದೆ ಅಡಗಿ ಕುಳಿತೆವು. ಈ ನಡುವೆ ಆ ಕೂಗು ಕಡಿಮೆಯಾಗುವ ಲಕ್ಷಣ ಕಾಣಿಸಲಿಲ್ಲ. ಇತ್ತ ನವಿಲೂ ಕೂಗುತ್ತಿದೆ, ಅಲ್ಲಿ ಆ ಪ್ರಾಣಿಯ ಕೂಗು.  ಸ್ವಲ್ಪ ಹೊತ್ತಿನ ನಂತರ ಹೊಳೆದದ್ದು ಅದೇನಿರಬಹುದೆಂದು! "ಶ್ರೇಯಸ್, ಅದು Barking Deer ಇರಬಹುದು! ಅದಾಗಿದ್ರೆ ಏನೂ ಮಾಡಲ್ಲ!", ಎಂದೆ. ಯಾಕಂದ್ರೆ ಅದು ದೊಡ್ಡ carnivore ಆಗಿದ್ದರೆ ನವಿಲು ಈ ಸದ್ದು ಕೇಳಿ ಕಾಲ್ಕೀಳುತಿತ್ತು. Barking Deer ಬಗ್ಗೆ ಓದಿದ್ದ ನೆನಪು ನನಗೆ. "ಸುಮ್ನಿರು ಯಾಕ್ ಬೇಕು! Shit ಎನಾಗೊಯ್ತಪ್ಪ" ಅಂತ ಹೇಳತೊಡಗಿದ. "ಸುಮ್ನಿರು ಏನು ಆಗಲ್ಲ, ಅದ್ ಹೋದ್ರೆ ಆಕಡೆ ಹೋಗಣ"ಎಂದೆ.

ಕ್ರಮೇಣ ಸದ್ದು ಮಾಡುವ ಪ್ರಾಣಿ ದೂರ ಹೊರಟಿತು. ನಾವು ಸ್ವಲ್ಪ ಹೊತ್ತಿನ ನಂತರ ಆ ಲಂಟಾನಗಳ ಮದ್ಯೆಯಿಂದ ಕಾಡಿನ ಹೊರಬಂದೆವು. ಬಯಲಿಗೆ ಬಂದಮೇಲೆ ಅದೇನೋ ಸಮಾಧಾನ. "ಉಫ್" ಎನ್ನುತ್ತಾ ಹಾಸ್ಟೆಲಗೆ ನಡೆದೆವು. ಹೋಗಿ internetಅಲ್ಲಿ 'barking deer' ಅಂತ ಸರ್ಚ್ ಕೊಟ್ಟು ನೋಡಿದ್ವಿ. ಅದರ call audio ಸಿಕ್ಕಿಕಿತು. ಅದನ್ನ ಕೇಳಿದಾಗ, "ಛೆ! ಅಲ್ಲೇ ಇದ್ದು ಒಂದು ಜಿಂಕೆ ಮಿಸ್ ಮಾಡ್ಕೊಂಡ್ವಲ್ಲೋ" ಎಂದೆ!




ಶಿಲೀಂಧ್ರ 

 ಪಾಚಿ